ನವಿಲುಗರಿ ಮರಿ ಹಾಕಿದೆ (ಲಲಿತ ಪ್ರಬಂಧಗಳು)
ನವಿಲುಗರಿ ಮರಿ ಹಾಕಿದೆ (ಲಲಿತ ಪ್ರಬಂಧಗಳು)
ನವಿಲುಗರಿ ಮರಿ ಹಾಕಿದೆ (ಲಲಿತ ಪ್ರಬಂಧಗಳು)
Share:
₹90
₹100
10% off
Ships within 3 days
SKU :
95
Description

ಲೇಖಕರು: ವಿನಾಯಕ ಅರಳಸುರಳಿ

ಬೆಲೆ: 100/-     ಪುಟಗಳು: 112

ಪ್ರಕಾಶನ: ಅಭಿನವ, ಬೆಂಗಳೂರು

.................

ಇಲ್ಲಿಯ ಪ್ರಬಂಧಗಳನ್ನು ಓದುವಾಗ ಸಹಜವಾಗಿಯೇ ಕೆಲವು ಸಂಗತಿಗಳು ನಮ್ಮ ಒಳಗನ್ನು ಸೆಳೆದುಕೊಳ್ಳುತ್ತವೆ. ಒಂದು ಸುಸಂಸ್ಕೃತ ಮನಸ್ಸು ಈ ಎಲ್ಲದರ ಹಿಂದಿದೆ. ಅದು ಮನುಷ್ಯನನ್ನು ಮಾತ್ರವಲ್ಲದೆ ಎಲ್ಲ ಜೀವಿ-ನಿರ್ಜೀವಿಗಳ ಬಗ್ಗೆಯೂ ಅಂತಃಕರಣದ ಭಾವ ಹೊಂದಿದೆ. ಮತ್ತು ಅದನ್ನು ಓದುಗರ ತೀರ ಹತ್ತಿರದಲ್ಲೇ ಕುಳಿತು ಆದ ಹೋದ ನಿಜವಾದ ಘಟನೆಯೆಂಬಂತೆ ಹೇಳುವ ಪರಿ ನಮ್ಮಲ್ಲಿ ಒಂದು ನಂಬಿಕೆ ಹುಟ್ಟಿಸಿಬಿಡುತ್ತದೆ. ಏಕೆಂದರೆ ಸ್ವತಃ ಬರಹಗಾರನಿಗೇ ತನ್ನ ಮಾತುಗಳಲ್ಲಿ ವಿಶ್ವಾಸವಿದೆ. ಹಾಗಾಗಿ ಎಲ್ಲ ಚರಾಚರಗಳ ಬಗೆಗೂ ಪ್ರೀತಿ ಹುಟ್ಟಿಕೊಳ್ಳುತ್ತದೆ. ಉದಾಹರಣೆಯಾಗಿ ನಿರ್ಜೀವಿಯೆನಿಸಿಕೊಂಡ ಬಸ್ಸನ್ನೇ ನೋಡಿ: ಅಜ್ಜನೊಡನೆ ಮೊಮ್ಮಗ ಕುಣಿಯುತ್ತ ನಡೆದು ಹೋಗುವುದನ್ನು ನೋಡಿದ ಬಸ್, ಖುಷಿಯಿಂದ ಕೇಕೆ ಹಾಕಿದಂತೆ ಹಾರ್ನ್ ಹೊಡೆದು ಸಂಭ್ರಮಿಸುತ್ತದೆ. ಹುಡುಗ ಬಸ್ಸಿನ ಒಂದೆಡೆ ಕೆತ್ತುವ ಪ್ರೀತಿಯ ಮಾತನ್ನು ಅದು ಅವನ ಪ್ರೇಯಸಿಗೆ ತಲುಪಿಸುತ್ತದೆ. ಮುಂದೆಂದೋ ಒಮ್ಮೆ ಆಕೆ ಆ ಶಬ್ದಗಳ ಮೇಲೆ ಬೆರಳಾಡಿಸಿದರೆ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರಡು ಮೂಡುತ್ತವೆ... ಕೊನೆಯ ನಿಲ್ದಾಣದ ನೀರವ ರಾತ್ರಿಯಲ್ಲಿ ಒಂಟಿಯಾಗಿ ನಿಂತುಕೊಂಡು ತನ್ನಿಂದ ಎಷ್ಟೋ ಜೀವಿಗಳಿಗಾದ ಸಾವು ನೋವುಗಳನ್ನು ನೆನೆದು ಮಮ್ಮಲ ಮರುಗುತ್ತದೆ. (ಇದು ಮನುಷ್ಯ ಮಾತ್ರನಾದವನಿಗೇ ಹೆಚ್ಚು ಹೆಚ್ಚು ಅನ್ವಯಿಸುತ್ತದೆ. ಇಂತಹ ಸೂಚನೆಗಳು ಪ್ರಬಂಧದಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ.) ಮತ್ತೆ ಹಾಗಾಗದಂತೆ ತನ್ನೊಳಗೇ ಇರುವ ಫೋಟೋದ ದೇವರಲ್ಲಿ ಬೇಡಿಕೊಳ್ಳುತ್ತದೆ... ಇಷ್ಟಾಗಿಯೂ ಬಸ್ಸು ಸ್ವಂತ ನೆಲೆಯಿಲ್ಲದ ಜಂಗಮವೇ ಹೌದು. ಕವಿವಾಣಿಯನ್ನು ಕೇಳಿಸಿಕೊಂಡಂತೆ ಅನಿಕೇತನವೇ ಆಗಿದೆ... ಅದಕ್ಕೆ ರಾತ್ರಿಯ ಕಟ್ಟ ಕಡೆಯ ಪ್ರಯಾಣಿಕನನ್ನು ಅವನೂರಿಗೆ ತಲುಪಿಸಿದ ಅನಂತರವೇ ನಿದ್ದೆ ಹತ್ತುವುದು... ಯಾವುದೊ ನಿಲ್ದಾಣದಲ್ಲಿ ಅಕ್ಕ- ಪಕ್ಕದಲ್ಲಿ ನಿಂತಾಗ ಬಸ್ಸುಗಳು ಪರಸ್ಪರ ಕಷ್ಟ ಸುಖದ ಇಂತಹ ಮಾತನ್ನು ಹೇಳಿಕೊಳ್ಳುತ್ತವೆ ಕೂಡ...! (ಬಸ್ಸೆನ್ನುವ ಸಂಭ್ರಮಗಳ ಸಾಗಣೆಕಾರ). ಇದು ಬಸ್ಸಿನ ಅಂತರಂಗದ ಚಿತ್ರಣ. ಇನ್ನು ಅದರ ಬಹಿರಂಗ ಸಂಭ್ರಮದ ಚಿತ್ರಣವೇ ಬೇರೆ! ಅದಾದರೆ ಪರಮ ಲೌಕಿಕ ವೈಭವ!


ವಿನಾಯಕ ಅವರ ಬರವಣಿಗೆಯ ವಿಶೇಷ ಸಾಧ್ಯತೆಯೆಂದರೆ ಅವರಲ್ಲಿ ನೆಲೆ ನಿಂತಿರುವ ಚಿತ್ರಕ ಶಕ್ತಿ. ಅದನ್ನು ಪ್ರತಿ ಪ್ರಬಂಧದಲ್ಲಿ ಕಾಣಬಹುದು. ಯಾವ ಸಣ್ಣ ಸಂಗತಿಯನ್ನೂ ಕಡೆಗಣಿಸಿ ಅವರು ಮುಂದುವರಿಯುವುದಿಲ್ಲ. `ಸಣ್ಣ’ ಸಂಗತಿಗಳೆಂಬುವು ಕೂಡ ಪದಮಾತ್ರಗಳಿಂದಲೇ ಕಣ್ಣಿನ ಮುಂದೆ ಬಂದು ನಿಲ್ಲುವಂತಹ ದೊಡ್ಡ ಮೂರ್ತಿಗಳನ್ನು, ಸನ್ನಿವೇಶಗಳನ್ನು ಕಟೆದು ನಿಲ್ಲಿಸಿ ಬಿಡುವಂಥವು. 


`... ಸಂಜೆಯ ಪೂಜೆಯ ವೇಳೆ ಅಕ್ಕ - ತಮ್ಮರಿಬ್ಬರೂ ಪರಸ್ಪರ ಪೈಪೋಟಿಯಲ್ಲಿ ಸಾಲು ಸಾಲು ದೀಪ ಹಚ್ಚುತ್ತಿರುವ ಸಂಭ್ರಮವನ್ನು ನೋಡಿದ ದೇವರ ಮುಖದಲ್ಲಿನ ಮಂದಹಾಸ ದುಪ್ಪಟ್ಟಾಗಿದೆ...’ `... ಪೂಜೆಗೊಂಡ ಹಸುವಿನ ಕೊರಳಲ್ಲಿರುವ ಹೂವಿನ ಹಾರವನ್ನು ತಿನ್ನಲೆಂದು ಅದರ ಪುಟ್ಟೀಕರು ನಾಲಿಗೆ ಚಾಚುತ್ತಿದೆ...’ ( ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ). ಇದು ತಳಲು ಮೇಯ ಬಯಸುವ ಹರಕೆಯ ಕುರಿಯ ನೆನಪು ತರುವುದರ ವೈರುಧ್ಯದ ಚಿತ್ರಣ.


`... ಹೀಗೆ ಯಾವುದೊ ಒಂದು ತಿಂಡಿಯನ್ನು ಹಿಡಿದು ಹೊರಟು, ಕೊನೆಯ ಬಾರಿಗೆಂಬಂತೆ ತಿರುಗಿ ನೋಡಿದ ಆ ಚಿಣ್ಣನಿಗೆ ಕೊನೆಗೂ ಅಂಗಡಿಯಲ್ಲೇ ಉಳಿದು ಹೋದ ಅವನು ಕೊಳ್ಳಲಾಗದ ಆ ಚಾಕ್ಲೇಟುಗಳೆಲ್ಲ ಕಣ್ಣೀರು ತುಂಬಿಕೊಂಡು ವಿದಾಯ ಹೇಳುತ್ತವೆ...’ (ಬಾಬಣ್ಣನಂಗಡಿಯೆಂಬ ನಮ್ಮೂರ ಬಿಗ್ ಬಜಾರ್). ಹೀಗೆ ಇಲ್ಲಿ ಚಾಕ್ಲೇಟುಗಳಿಗೂ ಜೀವ ಭಾವದ ಸಾಧ್ಯತೆಯನ್ನು ನೀಡಲಾಗುತ್ತಿದೆ...


ಪ್ರತಿ ವಾಕ್ಯವೂ ಚಿತ್ರವಾಗಿ ಮೂಡಿರುವ ಒಂದು ಪ್ರಬಂಧವೆಂದರೆ ಅದು `ಮದುವೆ ಛತ್ರದ ಚಿತ್ರಗಳು’. ಕವನಗಳನ್ನು ಹಾಡಲು ಒಬ್ಬರು, ಅದಕ್ಕಾಗಿ ಚಿತ್ರ ರಚಿಸಲು ಇನ್ನೊಬ್ಬರು ಇರುವುದನ್ನು ಅನೇಕ ಕಾರ್ಯಕ್ರಮಗಳಲ್ಲಿ ನಾವು ಕಾಣುತ್ತೇವೆ. ಆದರೆ ವಿನಾಯಕರ ಈ ಪ್ರಬಂಧದಲ್ಲಿ ಪದಗಳು ಮತ್ತು ಚಿತ್ರಗಳು ಬೇರೆ ಬೇರೆಯಾಗಿ ನಿಲ್ಲುವುದಿಲ್ಲ. ಟು ಇನ್ ಒನ್ ಅಂತಾರಲ್ಲ ಹಾಗೆ... ಓದುತ್ತಾ ಹೋದ ಹಾಗೆ ಮದುವೆಯ ಮುಖ್ಯ ವೇದಿಕೆಯಿಂದ ಹಿಡಿದು ಮೂಲೆಯಲ್ಲಿ ಕುಳಿತವರವರೆಗು ಎಲ್ಲರ ಸುಸ್ಪಷ್ಟ ದರ್ಶನವಾಗುತ್ತದೆ. ಇವರೆಲ್ಲರ ನಡುವೆ ಮದುವೆಯ ಜವಾಬ್ದಾರಿಯನ್ನೇ ಟವಲ್ ಆಗಿಸಿಕೊಂಡ ಹಿರಿಯರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಓಡಾಡುವುದೂ ಕಾಣುತ್ತದೆ.... ಚಕ್ ಚಕ್ ಎಂದು ತೆಗೆದ ಮದುವೆ ಫೋಟೊಗಳ ಅಲ್ಬಮ್ ನೋಡಿದ ಅನುಭವವೇ ಎಲ್ಲಾ...


ಬಾಬಣ್ಣನ ಅಂಗಡಿಯ ಚಿತ್ರಣವೂ ಹೀಗೇ.... ಅಂಗಡಿಯನ್ನು ಎದುರಿನಿಂದ ನೋಡುವುದಂತು ಸರಿಯೇ ಸರಿ. ಒಳಹೋಗಿ ಅಲ್ಲಿ ಅಂದವಾಗಿ ಜೋಡಿಸಿದ ವಸ್ತುಗಳನ್ನು, ಒಳಗೆ ನಡೆಯುವುದನ್ನು ವಿಭಿನ್ನವಾಗಿ ಕಾಣಿಸುವುದು ಮತ್ತೊಂದು ನೋಟ. ಸಾಲದೆಂದು ಅಂಗಡಿಯ ಎತ್ತರದ ಒಳಗಿನಿಂದ ಹೊರಗಿನ ದೃಶ್ಯ ನೋಡಲೂ ಇಲ್ಲಿ ಸಾಕಷ್ಟು ಅವಕಾಶ....


-ವಿಜಯೇಂದ್ರ ಪಾಟೀಲ

(ಮುನ್ನುಡಿಯಿಂದ)


ಅಭಿನವ24 products on store
Payment types
Create your own online store for free.
Sign Up Now