ನನ್ನೊಳಗಿನ ಅಪ್ಪ (ಆತ್ಮಕಥೆ)
ನನ್ನೊಳಗಿನ ಅಪ್ಪ (ಆತ್ಮಕಥೆ)
ನನ್ನೊಳಗಿನ ಅಪ್ಪ (ಆತ್ಮಕಥೆ)
Share:
₹160
Ships within 3 days
SKU :
99
Description

ಲೇಖಕರು: ಆತ್ಮಾನಂದ ಬೆಲೆ: 175/- ಪುಟಗಳು: 136 ISBN: 978-81-945570-6-7 ಪ್ರಕಾಶನ: ಅಭಿನವ, ಬೆಂಗಳೂರು ................ ‘ನನ್ನೊಳಗಿನ ಅಪ್ಪ’ ನಾನು ಈಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ಸಮುದಾಯಗಳ ಆತ್ಮಕಥೆ ಮತ್ತು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳ ನಿವೇದನೆ ಎರಡೂ ಆಗಬೇಕಾದ ತಂತಿನಡಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೀ ಆತ್ಮಾನಂದ ಅವರು ಸುಮಾರು ನೂರು ವರ್ಷಗಳ ಅವಧಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಆಲೋಚನೆಗಳು ದಲಿತ ಜೀವನದ ನರನಾಡಿಗಳನ್ನು ಆವರಿಸಿರುವ ಬಗೆಯನ್ನು ಮೂರು ಪೀಳಿಗೆಗಳ ಕಥಾನಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಕೇವಲ ಹಿಂಸೆ, ಶೋಷಣೆ ಮತ್ತು ವಿವಾದಗಳ ನಿವೇದನೆಯಷ್ಟೇ ಆಗದೆ, ಎಚ್ಚರ, ಪ್ರತಿಭಟನೆ, ಪ್ರಗತಿಗಳ ಕಥೆಯೂ ಆಗಿರುವುದು ಇದರ ಹೆಚ್ಚುಗಾರಿಕೆ. ಕಥೆ, ಕವಿತೆ, ಕಾದಂಬರಿಗಳ ಸಂಗಡ ಇಟ್ಟು ನೋಡಿದಾಗಲೂ ಈ ಪುಸ್ತಕವು ವಿಶಿಷ್ಟವಾಗಿ ನಿಲ್ಲುತ್ತದೆ. ಅಂಥ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ. ಕಳೆದ ಶತಮಾನದ ಏಳು ಎಂಟನೆಯ ದಶಕದವರೆಗೆ ಅಂಬೇಡ್ಕರ್ ಅವರು ದಲಿತರ ಬದುಕಿನ ಅಂತರ್ಜಲದಂತೆ ಕೆಲಸಮಾಡಿದ ಬಗೆಯು ಸಾರ್ವಜನಿಕರ ತಿಳಿವಳಿಕೆಯ ಆಚೆಯೇ ಉಳಿದಿತ್ತು. ಮಾಧ್ಯಮಗಳಲ್ಲಿ ಅವರಿಗೆ ಇದ್ದ ‘ವಿಸಿಬಿಲಿಟಿ’ ಬಹಳ ಕಡಿಮೆ. ಅವರನ್ನು ಸಾರ್ವಜನಿಕ/ರಾಜಕೀಯ ಜೀವನದಿಂದ ಹೇಗೋ ಹಾಗೆಯೇ ಸಾಮುದಾಯಿಕ ಸ್ಮೃತಿಯಿಂದಲೂ ದೂರವಿಡಲು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಸನಾತನಿಗಳೂ ನಿರಂತರವಾಗಿ ಪ್ರಯತ್ನಿಸಿದರು. ಆದರೆ ಅವರು ಹತ್ತಿಸಿಕೊಟ್ಟ ಪಂಜುಗಳು ದಲಿತಕೇರಿಗಳ ಒಡಲಿನಲ್ಲಿ ಮತ್ತು ಅಂಥ ಮನಸ್ಸುಗಳಲ್ಲಿ ಉರಿಯುತ್ತಲೇ ಇದ್ದವು, ತಿಳಿವಳಿಕೆಯ ಬೆಳಕಾಗಿ ಮತ್ತು ಪ್ರತಿಭಟನೆಯ ಬೆಂಕಿಯಾಗಿ. ಮಧ್ಯಮವರ್ಗದ ಬುದ್ಧಿಜೀವಿಗಳ ಲೋಕಕ್ಕೆ ಅದರ ಸುಳಿವೂ ಸಿಕ್ಕಿರಲಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಕರ್ನಾಟಕದ ಸಂಸ್ಕೃತಿಯ ಜೀವಕೇಂದ್ರಗಳಾದ ‘ಮಲೆ ಮಾದೇಶ್ವರ ಕಾವ್ಯ’ ಮತ್ತು ‘ಮಂಟೇಸ್ವಾಮಿ ಕಾವ್ಯ’ಗಳು ಸಾಹಿತ್ಯಚರಿತ್ರೆಗೆ ಅಪರಿಚಿತವಾಗಿ ಬಾಳುತ್ತಿದ್ದ ಹಾಗೆ, ಸಂಸ್ಕೃತಿಚರಿತ್ರೆಗೆ ಆಗಂತುಕರಾಗಿ ಅಂಬೇಡ್ಕರ್ ಅವರು ಇದ್ದರು. ಇವರಿಬ್ಬರೂ ಆ ಸಮುದಾಯಗಳಿಗೆ ಒಂದು ಮಟ್ಟದ ಆತ್ಮವಿಶ್ವಾಸ ಮತ್ತು ನೆಮ್ಮದಿಯನ್ನು ಕೊಟ್ಟಿದ್ದರು. ಆತ್ಮಾನಂದ ಅವರ ಪುಸ್ತಕವನ್ನು ಹೀಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಅಂಬೇಡ್ಕರ್ ಅವರ ಪ್ರಭಾವವು ಹಳೆಯ ಮೈಸೂರಿನ ಹಳ್ಳಿ ಪಟ್ಟಣಗಳಲ್ಲಿ ಉಂಟುಮಾಡುತ್ತಿದ್ದ ಚಾಲನೆಯನ್ನು ಗುರುತಿಸಿ ದಾಖಲೆ ಮಾಡುತ್ತದೆ. ಈ ಕಥನದ ಕೇಂದ್ರ ಪಾತ್ರವಾದ ಪುಟ್ಟಸ್ವಾಮಿಯವರು ಬಾಬಾ ಸಾಹೇಬರನ್ನು ಅಷ್ಟು ಹಿಂದೆಯೇ ಕಂಡುಕೊಂಡ, ಅರ್ಥಮಾಡಿಕೊಂಡ, ಅರಗಿಸಿಕೊಂಡ, ಅಳವಡಿಸಿಕೊಂಡ ಮತ್ತು ಹಂಚಿಕೊಂಡ ಬಗೆಯು ಅಚ್ಚರಿ ಮತ್ತು ಆನಂದಗಳನ್ನು ಉಂಟುಮಾಡುತ್ತದೆ. ನಮ್ಮ ಬುದ್ಧಿಜೀವಿಗಳು ಗಾಂಧಿ, ಮಾರ್ಕ್ಸ್ ಮತ್ತು ಲೋಹಿಯಾರನ್ನು ಬಿಟ್ಟು ಆಚೆ ಈಚೆ ಹೋಗದಿದ್ದ ಆ ಕಾಲದಲ್ಲಿ ಬಹುಮಟ್ಟಿಗೆ ಅನಕ್ಷರಸ್ಥನಾದ ತರುಣನೊಬ್ಬನ ಕನಸು ಮತ್ತು ತಲ್ಲಣಗಳ ಭಾಗವಾಗಿ ಅಂಬೇಡ್ಕರ್ ಇದ್ದುದು, ಅವರು ಆತನ ಜೀವನದರ್ಶನವನ್ನು ರೂಪಿಸಿದ್ದು ಸಾಮಾನ್ಯವಲ್ಲ. ಕನ್ನಡದ ದಲಿತಕಥನಗಳಲ್ಲಿಯೂ ಈ ಆಗುಹೋಗುಗಳ ಪರಿಚಯ ಅಷ್ಟಾಗಿ ಇಲ್ಲ. -ಎಚ್. ಎಸ್. ರಾಘವೇಂದ್ರ ರಾವ್

ಅಭಿನವ24 products on store
Payment types
Create your own online store for free.
Sign Up Now